ಮುಂಗುಸಿ
ಕಾರ್ನಿವೊರಗಣದ ಹರ್ಪೆಸ್ಟಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸ್ತನಿ (ಮಾಂಗುಸ್), ಕೀರ ಪರ್ಯಾಯನಾಮ. ಇದರ ವೈಜ್ಞಾನಿಕ ಹೆಸರು ಹರ್ಪೆಸ್ಟಿಸ್. ಇದರಲ್ಲಿ ಎಡ್ವರ್ಡ್‍ಸಿಯೈ, ಆರೊಪಂಕ್ಟೇಟಸ್ ವಿಟಿಕಾಲಿಸ್, ಅರ್ವ ಮತ್ತು ಫಸ್ಕಸ್ ಎಂಬ ಐದು ಪ್ರಧಾನ ಜಾತಿಗಳುಂಟು. ಇವಕ್ಕೆ ಕ್ರಮವಾಗಿ ಸಾಮಾನ್ಯ ಮುಂಗುಸಿ ಭಾರತದ ಸಣ್ಣ ಮುಂಗುಸಿ ಪಟ್ಟೆಕತ್ತಿನ ಮುಂಗುಸಿ, ಏಡಿ ತಿನ್ನುವ ಮುಂಗುಸಿ ಮತ್ತು ಕಂದುಮುಂಗುಸಿ ಎಂಬ ಸಾಮಾನ್ಯ ಹೆಸರುಗಳುಂಟು. ಇವುಗಳ ಪೈಕಿ ಮೊದಲನೆಯದು ಭಾರತಾದ್ಯಂತ ಕಾಣದೊರೆಯುತ್ತದಾದರೆ, ಎರಡನೆಯದು ಇರಾನ್‍ನಿಂದ ಮೊದಲುಗೊಂಡು ಬರ್ಮ ಮಲಯವರೆಗೆ ಭಾರತದ ಕಾಶ್ಮೀರ, ಬಂಗಾಲ, ಅಸ್ಸಾಮ್ ಮುಂತಾದೆಡೆಗಳಲ್ಲೂ ಮೂರನೆಯದು ದಕ್ಷಿಣ ಭಾರತದ ಪಶ್ಚಿಮ ಮತ್ತು ಶ್ರೀಲಂಕಾದಲ್ಲೂ ನಾಲ್ಕನೆಯದು ನೇಪಾಲ, ಅಸ್ಸಾಮ್, ಬರ್ಮ ದಕ್ಷಿಣ ಚೀನಗಳಲ್ಲೂ ಐದನೆಯದು ದಕ್ಷಿಣ ಭಾರತದ ಗುಡ್ಡಗಾಡುಗಳಲ್ಲೂ ಸಿಕ್ಕುತ್ತವೆ.

	ಪುನುಗು ಬೆಕ್ಕು, ಮರಬೆಕ್ಕು, ಲಿನ್‍ಸ್ಯಾಂಗ್ ಮುಂತಾದ ಸ್ತನಿಗಳಿಗೆ ಹತ್ತಿರ ಸಂಬಂಧಿಗಳೆನಿಸಿರುವ ಮುಂಗುಸಿಗಳನ್ನು ಮೇಲಿನವುಗಳ ಜೊತೆಯಲ್ಲಿ ವೈವರಿಡೀ ಎಂಬ ಕುಟುಂಬಕ್ಕೆ ಸೇರಿಸಲಾಗಿತ್ತು. ಆದರೆ ಕೆಲವೊಂದು ದೈಹಿಕ ಹಾಗೂ ಸ್ವಭಾವ ಸಂಬಂಧಿ ಗುಣಲಕ್ಷಣಗಳಲ್ಲಿ ಮುಂಗುಸಿಗಳು ಪುನುಗುಬೆಕ್ಕುಗಳಿಗಿಂತ ಭಿನ್ನವಾಗಿರುವುದರಿಂದ ಮುಂಗುಸಿಗಳನ್ನು ಹರ್ಪೆಸ್ಟಿಡೀ ಕುಟುಂಬಕ್ಕೆ ಸೇರಿಸಲಾಗಿದೆ. ಉದಾಹರಣೆಗೆ ಮುಂಗುಸಿಗಳ ಕಿವಿಗಳು ಚಿಕ್ಕವು: ಬೆರಳುಗಳು ದೊಡ್ಡವೂ ಹೆಚ್ಚು ಬಿಡಿ ಬಿಡಿಯಾಗಿರುವಂಥವು ಉದ್ದ ಉಗುರು ಪಡೆದಿರುವಂಥವು ಆಗಿದೆ: ಮುಂಗುಸಿಗಳಲ್ಲಿ ಪುನುಗು ಆಥವಾ ಸುಗಂಧಗಳಿಲ್ಲ: ಹಾಗೂ ಮುಂಗುಸಿಗಳು ಸ್ವಭಾವತಃ ಬೇಟೆಯಾಡಿ ಜೀವಿಸುವಂಥವು.

	ದೇಹದ ಗಾತ್ರದಲ್ಲೂ ಮೈಬಣ್ಣದಲ್ಲೂ ಮುಂಗುಸಿಗಳ ವಿವಿಧ ಜಾತಿಗಳು ವೈವಿಧ್ಯವನ್ನು ತೋರುವುವಾದರೂ ಎಲ್ಲವೂ ಹೆಚ್ಚು ಕಡಿಮೆ ಒಂದೇ ತೆರೆನಾಗಿ ಕಾಣುವುವು. ಇವುಗಳ ಪೈಕಿ ಅತಿ ಚಿಕ್ಕದೆಂದರೆ ಭಾರತದ ಸಣ್ಣಮುಂಗುಸಿ (ಇದರ ದೇಹದ ಒಟ್ಟು ಉದ್ದ 45-50 ಸೆಂಮೀ). ಅತಿ ದೊಡ್ಡದು ಪಟ್ಟೆ ಕತ್ತಿನ ಮುಂಗುಸಿ (ಇದರ ಉದ್ದ ಸುಮಾರು 90 ಸೆಂ ಮೀ; ತೂಕ 3.2 ಕೆಜಿ). ಸಾಮಾನ್ಯ ಮುಂಗುಸಿ ಹೆಚ್ಚು ಕಡಿಮೆ ಇದರಷ್ಟೇ ಇದೆಯಾದರೂ ತೂಕದಲ್ಲಿ ಅರ್ಧದಷ್ಟಿದೆ. ಎಲ್ಲವುಗಳಲ್ಲೂ ದೇಹದ ಉದ್ದದ ಅರ್ಧದಷ್ಟು ಬಾಲ ಇದೆ.
	ಮೈಬಣ್ಣ ಸಾಮಾನ್ಯ ಮುಂಗುಸಿಯಲ್ಲಿ ಹಳದಿಮಿಶ್ರಿತ ಬೂದಿ. ಅಲ್ಲದೆ ಪ್ರತಿಯೊಂದು ಕೂದಲಿನ ಮೇಲೆ ತಿಳಿಬಣ್ಣದ ಮತ್ತು ಕಡುಬಣ್ಣದ ಪಟ್ಟೆಗಳು ಇರುವುದರಿಂದ ಇಡೀ ದೇಹಕ್ಕೆ ಒಂದು ರೀತಿಯ ಬಿಳಿಗಪ್ಪಿನ ಛಾಯೆ ಒದಗಿದೆ. ಸಣ್ಣ ಮುಂಗುಸಿ ಹೆಸರುಮಿಶ್ರಿತ ಕಂದು ಬಣ್ಣದ್ದಾದರೆ, ಪಟ್ಟೆ ಕತ್ತಿನ ಮುಂಗುಸಿ ಕೆಂಪು ಬಣ್ಣದ್ದೂ ಏಡಿತಿನ್ನುವ ಮುಂಗುಸಿ ಬೂದು ಬಣ್ಣದ್ದೂ ಆಗಿವೆ.

	ಎಲ್ಲ ಮುಂಗುಸಿಗೂ ಕುರುಚಲು ಕಾಡು, ಕೃಷಿಭೂಮಿ ಮರಗಳ ತೋಪು ಇತ್ಯಾದಿ ನೆಲೆಗಳ ಬಳಿ ವಾಸಿಸುತ್ತಿದ್ದು ಹಗಲಿನಲ್ಲೂ ರಾತ್ರಿಯಲ್ಲೂ ಬೇಟೆಯಾಡುತ್ತ ತಮ್ಮ ಆಹಾರನ್ವೇಷಣೆಯಲ್ಲಿ ತೊಡಗಿರುತ್ತವೆ. ಒಂಟಿಯಾಗಿ ಇಲ್ಲವೆ ಹೆಣ್ಣು ಗಂಡು ಮುಂಗುಸಿಗಳು ಜೊತೆಗೂಡಿ ಅಥವಾ ತಾಯಿ ಮರಿಗಳೊಡಗೂಡಿ ಬೇಟೆಯಾಡುವುವು. ಇಲಿ, ಹಾವು, ಓತಿ, ಕಪ್ಪೆ, ಕೀಟ, ಚೇಳು ಜರಿ ಮುಂತಾದವಲ್ಲದೆ ಕೋಳಿ ಹಲವು ಬಗೆಯ ಹಣ್ಣು, ಬೇರುಗಳನ್ನು ತಿನ್ನುತ್ತವೆ. ಏಡಿ ತಿನ್ನುವ ಮುಂಗುಸಿ ಕೆರೆಹಳ್ಳಗಳ ಬಳಿವಾಸಿಸುತ್ತಿದ್ದು ಮೀನು, ಏಡಿ ಮುಂತಾದ ಜಲವಾಸಿ ಪ್ರಾಣಿಗಳನ್ನು ಭಕ್ಷಿಸುತ್ತದೆ.

	ಸಂತಾನವೃದ್ಧಿಗೆ ನಿರ್ದಿಷ್ಟ ಶ್ರಾಯವಿಲ್ಲ. ವರ್ಷಕ್ಕೆ ಸುಮಾರು 3 ಸೂಲಿನಲ್ಲಿ ಮರಿ ಹಾಕುತ್ತದೆ. ಮುಂಗುಸಿಗಳನ್ನು ಮನೆಯಲ್ಲಿ ಸಾಕುವುದಿದೆ.	
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ